ನರಸಿಂಗರಾವ್, ಬೆನಗಲ್
1887-1953. ಭಾರತದ ಒಬ್ಬ ಪ್ರಮುಖ ನ್ಯಾಯವಾದಿ, ಸಂವಿಧಾನತಜ್ಞ. ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿದ್ದವರು. ಭಾರತದ ಸಂವಿಧಾನರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲೊಬ್ಬರು. ಬಿ.ಎನ್. ರಾವ್ ಎಂದು ಪ್ರಖ್ಯಾತರಾದ ಇವರು ದಕ್ಷಿಣ ಕನ್ನಡ ಜಿಲ್ಲೆಯ ಚಿತ್ರಾಪುರ ಸಾರಸ್ವತ ಕುಟುಂಬಗಳಲ್ಲಿ ಒಂದಾದ ಬೆನಗಲ್ ಮನೆತನದಲ್ಲಿ 1887ರ ಫೆಬ್ರವರಿ 26ರಂದು ಜನಿಸಿದರು. ಸ್ವಾತಂತ್ರ್ಯಪೂರ್ವದ ಮದರಾಸು ಪ್ರೆಸಿಡೆನ್ಸಿಯಲ್ಲಿ ಸರ್ಕಾರಿ ವೈದ್ಯರಾಗಿದ್ದ ಬಿ.ರಾಘವೇಂದ್ರರಾವ್ ಇವರ ತಂದೆ, ರಾಧಾಬಾಯಿ ಇವರ ತಾಯಿ, ಇವರು 1905ರಲ್ಲಿ ಮದರಾಸು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.ಪದವಿ ಗಳಿಸಿ, ಭಾರತ ಸರ್ಕಾರದ ಶಿಷ್ಯವೇತನ ಪಡೆದು ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿ ಕೇಂಬ್ರಿಜಿನ ಟ್ರಿನಿಟಿ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿದರು. ಐ.ಸಿ.ಎಸ್. ಪರೀಕ್ಷೆಯಲ್ಲಿ ಜಯಗಳಿಸಿ 1910ರಲ್ಲಿ ಭಾರತಕ್ಕೆ ಮರಳಿ ಬಂಗಾಲದಲ್ಲಿ 14 ವರ್ಷಗಳ ಕಾಲ ಹಲವಾರು ಜಿಲ್ಲೆಗಳಲ್ಲಿ ಅಧಿಕಾರಿಯಾಗಿಯೂ ನ್ಯಾಯಾಧೀಶರಾಗಿಯೂ ಇದ್ದರು. ದೇಶದ ಸಿವಿಲ್ ಕ್ರಿಮಿನಲ್ ಕಾನೂನುಗಳಲ್ಲಿ ಪರಿಣತಿ ಪಡೆದರು. ಇವರು 1919-20ರಲ್ಲಿ ಮುರ್ಷಿದಾಬಾದ್‍ನ ಜಿಲ್ಲಾ ಹಾಗೂ ಸೆಷನ್ಸ್ ಜಡ್ಜರಾಗಿಯೂ 1920-25ರಲ್ಲಿ ಸಿಲ್ಹೆಟ್ ಹಾಗೂ ಕಚಾರ್‍ಗಳ ಡಿಸ್ಟ್ರಿಕ್ಟ್ ಹಾಗೂ ಸೆಷನ್ಸ್ ಜಡ್ಜರಾಗಿಯೂ ಕೆಲಸ ಮಾಡಿದರು. ಇವರು 1925ರಲ್ಲಿ ಅಸ್ಸಾಂ ಪ್ರಾಂತ್ಯ ವಿಧಾನ ಪರಿಷತ್ತಿನ ಕಾರ್ಯದರ್ಶಿ ಹಾಗೂ ಸರ್ಕಾರದ ಕಾನೂನು ಸಲಹೆಗಾರರಾಗಿ 1933ರವರೆಗೆ ಆ ಕಾರ್ಯವನ್ನು ನಿರ್ವಹಿಸಿದರು. ಭಾರತದ ರಾಜಕೀಯ ಸುಧಾರಣೆಗಳ ಪರಿಶೀಲನೆಗೆ ಸೈಮನ್ ಆಯೋಗ ಬಂದಾಗ ಸರ್ಕಾರದ ಪರವಾಗಿ ಇವರು ಬರೆದುಕೊಟ್ಟ ನಿವೇದನೆ ಎಷ್ಟು ಪ್ರಭಾವಪೂರ್ಣವಾಗಿತ್ತೆಂದರೆ, ಅಸ್ಸಾಂ ಸರ್ಕಾರ ತನ್ನ ಪರವಾಗಿ ವಾದಿಸಲು, 1933ರಲ್ಲಿ ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿಗೆ ಇವರನ್ನೇ ನಿಯೋಜಿಸಿ ಕಳುಹಿಸಿತು. 1934-35ರಲ್ಲಿ ಭಾರತ ಸರ್ಕಾರದ ಲೆಜಿಸ್ಲೆಟಿವ್ ವಿಭಾಗದಲ್ಲಿ ಇವರು ಕಾರ್ಯದರ್ಶಿಗಳಾಗಿದ್ದರು. 1935ರಲ್ಲಿ ಸ್ವಲ್ಪ ಕಾಲ ಇವರು ಕಲ್ಕತ್ತ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದರು. 1935ರ ಭಾರತ ಸರ್ಕಾರದ ಅಧಿನಿಯಮ ಜಾರಿಗೆ ಬಂದಾಗ ಕೇಂದ್ರ ಹಾಗೂ ಪ್ರಾದೇಶಿಕ ಕಾನೂನುಗಳ ಪುನಃಪರಿಶೀಲನೆಗೆ ಇವರು ನೇಮಕಹೊಂದಿ ಆ ಕೆಲಸವನ್ನು 18 ತಿಂಗಳುಗಳಲ್ಲಿ ಮುಗಿಸಿಕೊಟ್ಟರು. 1938ರಲ್ಲಿ ಸುಧಾರಣಾ ಆಯೋಗದಲ್ಲಿ ಇವರು ಕೆಲಸ ಮಾಡಿದರು. ಜನವರಿ 1939ರಲ್ಲಿ ಮತ್ತೆ ಕಲ್ಕತ್ತ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಮುಂದುವರಿದರು. ಜಿ.ಐ.ಪಿ. ರೈಲ್ವೆ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ವಿಚಾರಣಾ ಸಮಿತಿಗೆ ಇವರನ್ನು 1940ರಲ್ಲಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಹಿಂದೂ ನ್ಯಾಯವನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ 1941ರಲ್ಲಿ ರಚಿಸಿದ ಸಮಿತಿಗೆ ಬಿ.ಎನ್. ರಾವ್ ಅವರನ್ನು ಅಧ್ಯಕ್ಷರಾಗಿ ನೇಮಕಮಾಡಿತು. 1941-42ರ ಸಿಂಧೂ ಆಯೋಗದಲ್ಲೂ ಇವರು ಇದ್ದರು. ಭಾರತ ಸರ್ಕಾರದ ಸೇವೆಯಿಂದ 1944ರ ಫೆಬ್ರವರಿಯಲ್ಲಿ ಇವರು ನಿವೃತ್ತಿ ಹೊಂದಿದರೂ ಇವರ ಸೇವೆ ಒಂದಿಲ್ಲೊಂದು ರೀತಿಯಲ್ಲಿ ಮುಂದುವರಿಯಿತು. 1944ರಲ್ಲಿ ಇವರು ಜಮ್ಮು ಮತ್ತು ಕಾಶ್ಮೀರದ ಪ್ರಧಾನಮಂತ್ರಿಯಾಗಿ ಸಂದಿಗ್ಧಕಾಲದಲ್ಲಿ ದುಡಿದರು. 18 ತಿಂಗಳುಗಳ ಕಾಲ ಆ ಹುದ್ದೆಯಲ್ಲಿದ್ದರು. ಮಹಾರಾಜರೊಂದಿಗೆ ಬಂದ ಭಿನ್ನಾಭಿಪ್ರಾಯದಿಂದ ಇವರು ಅದಕ್ಕೆ ರಾಜೀನಾಮೆ ಸಲ್ಲಿಸಿದರು. ಭಾರತ ಸಂವಿಧಾನ ರಚನಾಸಭೆಗೆ 1946ರ ಜುಲೈಯಲ್ಲಿ ಇವರು ಸಂವಿಧಾನ ಸಲಹೆಗಾರರಾಗಿ ನೇಮಿತರಾದರು. ಹೊಸ ಸಂವಿಧಾನದ ರೂಪರೇಷೆಗಳನ್ನು ಕುರಿತ ಲೇಖನವನ್ನು ಇವರು 1946ರ ಜನವರಿಯಲ್ಲೇ ಬರೆದಿದ್ದರು. ಇವರು ವಿಶ್ವ ಸಂಸ್ಥೆಯ ಕಾನೂನು ಆಯೋಗದಲ್ಲೂ ಇದ್ದರಲ್ಲದೆ ಆ ಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಗಳಾಗಿದ್ದರು. ವಿಶ್ವ ಸಂಸ್ಥೆಯ ಭದ್ರತಾ ಸಮಿತಿಗೆ ಭಾರತದ ಆಯ್ಕೆ ಆದಾಗ ರಾವ್ ಅವರು ಕಾಶ್ಮೀರ ಸಮಸ್ಯೆ, ಪರಮಾಣು ಶಕ್ತಿ, ಆಫ್ರಿಕದಲ್ಲಿ ಇಟಲಿಯ ವಸಾಹತುಗಳು, ಕೊರಿಯ, ಚೀನ ಮುಂತಾದ ವಿಭಿನ್ನ ವಿಷಯಗಳ ಬಗ್ಗೆ ಭಾರತದ ವಕ್ತಾರರಾಗಿ ವಾದ ಮಂಡಿಸುತ್ತಿದ್ದರು. 1951ರ ಕೊನೆಯ ವೇಳೆಗೆ ದಿ ಹೇಗ್‍ನ ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಯಾದರು. ಅತ್ಯಂತ ಪ್ರತಿಪ್ಠಿತವಾದ ಈ ಅತ್ಯುಚ್ಚ ಪದವಿಯಲ್ಲಿದ್ದಾಗಲೇ 1953ರ ನವೆಂಬರ್ 30ರಂದು ಇವರು ನಿಧನರಾದರು.

	ಇವರ ಮೂವರು ಸೋದರರೂ ಪ್ರಸಿದ್ಧರಾದವರು. ಹಿರಿಯ ಸೋದರ ಬಿ.ಸಂಜೀವರಾವ್ ಖ್ಯಾತ ಶಿಕ್ಷಣತಜ್ಞ. ಕಿರಿಯ ಸೋದರರಲ್ಲೊಬ್ಬರಾದ ಬಿ.ರಾಮರಾವ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯದ ಗವರ್ನರ್ ಆಗಿದ್ದವರು. ಇನ್ನೊಬ್ಬ ಸೋದರರು ಖ್ಯಾತ ಪತ್ರಿಕೋದ್ಯಮಿ ಹಾಗೂ ಗ್ರಂಥಕರ್ತರಾದ ಬಿ.ಶಿವರಾವ್. ಅವರು ಬಿ. ಎನ್. ರಾವ್ ಅವರ ಪ್ರೌಢ ಲೇಖನಗಳನ್ನು ಇಂಡಿಯಾಸ್ ಕಾನ್‍ಸ್ಟಿಟ್ಯೂಷನ್ ಇನ್ ದಿ ಮೇಕಿಂಗ್ ಎಂಬ ಹೆಸರಿನ ಅಡಿಯಲ್ಲಿ ಸಂಪಾದಿಸಿದ್ದಾರೆ.

	ವೈದ್ಯವಿಜ್ಞಾನ, ಶಸ್ತ್ರಚಿಕಿತ್ಸೆ ಮತ್ತಿತರ ವಿಜ್ಞಾನ ಶಾಖೆಗಳಲ್ಲಿ ಸಂಶೋಧನೆಗಳನ್ನು ನಡೆಸುವ ಸಲುವಾಗಿ ಕೇಂದ್ರ ಸಂಶೋಧನ ಸಂಸ್ಥೆಯೊಂದರ ಯೋಜನೆಯನ್ನು ಬಿ.ಎನ್. ರಾಯರು 1939ರಲ್ಲಿ ಸಿದ್ಧಪಡಿಸಿ ಅದಕ್ಕೆ ಬೇಕಾದ ಪೂರ್ವಭಾವಿ ಸಿದ್ಧತೆಗಳನ್ನು ನಡೆಸಿದ್ದರು. ಎರಡನೆಯ ಮಹಾಯುದ್ಧದ ಕಾಲದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸರ ಭಾರತ ರಾಷ್ಟ್ರೀಯ ಸೇನೆಯ ಅಧಿಕಾರಿಗಳ ವಿರುದ್ಧ ನಡೆದ ವಿಚಾರಣೆಯಲ್ಲಿ ಆಪಾದಿತರ ಪರವಾದ ವಕಾಲತ್ತಿಗೆ ಹಿಂದೆ ಇದ್ದವರು ಬಿ.ಎನ್. ರಾವ್ ಅವರು.
(ಎಸ್.ಎಸ್.ಎಂಯು.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ